ಭಾನುವಾರ, ಡಿಸೆಂಬರ್ 6, 2015

ನಮ್ಮ ಇಂದಿನ ಜೀವನ ನಿನ್ನೆಯ ಯೋಚನೆಯ ಕೈಗನ್ನಡಿ


"ನಮ್ಮ ಹಣೆಬರಹಕ್ಕೆ ಹೊಣೆ ಯಾರು" "ನಮ್ಮ ಹಣೆಬರಹವೇ ಇಷ್ಟು" ಎಂದೆಲ್ಲಾ ನಾವು ಯೋಚಿಸುವುದುಂಟು. ಆದರೆ ಜಗತ್ತಿನಲ್ಲಿ ಒಂದು ಶಕ್ತಿ ಇದೆ. ಈ ಶಕ್ತಿಯ ಬಗ್ಗೆ ಕೆಲವೇ ಕೆಲವರು ಅರಿತು ಪ್ರಯೋಗಿಸಿ ಉಜ್ವಲ ಭವಿಷ್ಯ ಕಟ್ಟಿಕೊಂಡು ಅಪಾರ ಹಣ, ಐಶ್ವರ್ಯ, ಯಶಸ್ಸು, ಕೀರ್ತಿ ಸಂಪಾದಿಸಿದ್ದಾರೆ. ಹಾಗಾದರೆ ಆ ರಹಸ್ಯ ಶಕ್ತಿ ಯಾವುದು? ಅದುವೇ ಆಕರ್ಷಣೆಯ ಶಕ್ತಿ. ಹೌದು ಇದು ಜಗತ್ತಿನ ನಿಯಮ. ನಾವು ಈಗ ಏನನ್ನು ಸಂಪಾದಿಸಿದ್ದೆವೆಯೋ ಇವೆಲ್ಲವನ್ನೂ ನಾವೇ ನಮ್ಮೆಡೆಗೆ ಆಕರ್ಷಿದ್ದಾಗಿದೆ. ಹಾಗಾದರೆ ಈ ಶಕ್ತಿ ಹೇಗೆ ಕೆಲಸ ಮಾಡುತ್ತದೆ? ನಾವು ಒಳ್ಳೆಯ ಭವಿಷ್ಯವನ್ನು ಹೇಗೆ ಕಟ್ಟಿಕೊಳ್ಳಬಹುದು? ಇವೆಲ್ಲ ಸಾಧ್ಯವಿರುವುದು ನಮ್ಮ ಯೋಚನೆಗಳಿಂದ. ಹೌದು ನಮ್ಮ ಇಂದಿನ ಪರಿಸ್ಥಿತಿ, ಒಳ್ಳೆಯದಿರಲಿ ಅಥವಾ ಅಷ್ಟೊಂದು ಒಳ್ಳೆಯದಿಲ್ಲದಿರಲಿ, ಇವೆಲ್ಲವೂ ನಮ್ಮ ಭೂತಕಾಲದ ಯೋಚನೆಯ ಫಲವಾಗಿದೆ. ಜಗತ್ತಿನ 1% ಜನರು 90%ಗಿಂತಲೂ ಅಧಿಕ ಸಂಪತ್ತು ಹೊಂದಿದ್ದಾರೆ. ಇವರ ಮುಖ್ಯ ಯೋಚನೆ ಹಣ,ಸಂಪತ್ತುಗಳಾದ್ದರಿಂದ ಇವರಿಗೆ ಸಂಪತ್ತು ಆಕರ್ಷಣೆಗೊಳಗಾಗಿ ಇವರನ್ನು ಧನಿಕರನ್ನಾಗಿಸಿದೆ. ನಾವು ಭವಿಷ್ಯದಲ್ಲಿ ಹೇಗಿರಬೇಕು, ನಮಗೆ ಏನು ಬೇಕೆಂಬುದನ್ನು ನಮ್ಮ ಮುಖ್ಯ ಯೋಚನೆ/ವಿಚಾರವನ್ನಾಗಿಸಿ ಸದಾ ಮನಸ್ಸನ್ನು ಕೇಂದ್ರೀಕರಿಸುವುದರಿಂದ ನಮ್ಮ ಹಣೆಬರಹ ಬದಲಿಸಿಕೊಂಡು ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬಹುದು. ನಾವು ಏನನ್ನು ಹೆಚ್ಚಾಗಿ ಯೋಚಿಸುತ್ತೇವೆಯೋ ಅದನ್ನು ಖಂಡಿತವಾಗಿಯೂ ನಾವು ನಮ್ಮ ಜೀವನದಲ್ಲಿ ಪಡೆಯುತ್ತೆವೆ. ಹಾಗಾಗಿ ಒಳ್ಳೆಯ/ಧನಾತ್ಮಕ ಅಂಶಗಳ ಯೋಚನೆ ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ನಾವು ಉತ್ತಮ ಹವ್ಯಾಸಗಳಾದ ವ್ಯಾಯಾಮ, ಯೋಗಗಳನ್ನು ಮರೆತು ಕೊಲೆ, ದರೋಡೆ, ಅಸಹಿಷ್ಣುತೆ ಮುಂತಾದ ಋಣಾತ್ಮಕ ವಿಚಾರಗಳಿಂದ ತುಂಬಿರುವ ದಿನಪತ್ರಿಕೆ, ಸುದ್ದಿವಾಹಿನಿಗಳ  ಮೂಲಕ ನಮ್ಮ ದಿನಚರಿ ಪ್ರಾರಂಭಿಸುತ್ತಿದ್ದೆವೆ. ಇದರಿಂದ ನಮ್ಮ ಮನಸ್ಸಿನಲ್ಲಿ ಋಣಾತ್ಮಕ ವಿಚಾರ/ಯೋಚನೆ ತುಂಬಿಕೊಳ್ಳುತ್ತವೆ ಹಾಗೂ ನಮ್ಮೆಡೆಗೆ ಆಕರ್ಷಿತವಾಗುತ್ತವೆ. ಇದರಿಂದ  ಯಾವಾಗಲೂ ಕೆಟ್ಟ ಸುದ್ದಿ ನಮ್ಮ ಕಿವಿಗೆ ಬಂದು ತಲುಪುತ್ತಿವೆ. ಒಂದಂತು ನಿಜ ದಿನಪತ್ರಿಕೆ, ಸುದ್ದಿವಾಹಿನಿಗಳನ್ನು ಕಡಿಮೆ ಮಾಡುವದರಿಂದ ನಾವೇನು ಕಳೆದುಕೊಳ್ಳುವುದಿಲ್ಲ. ನಮಗೆ ಅಗತ್ಯವಾದ ಸುದ್ದಿಗಳು ನಮಗೆ ಹೇಗಾದರೂ ಬಂದು ತಲುಪುತ್ತದೆ. ಹಾಗಾಗಿ ನಾವು ಋಣಾತ್ಮಕ ಶಕ್ತಿಯ ಆಗರವಾದ ಟಿವಿ, ದಿನಪತ್ರಿಕೆ, ಋಣಾತ್ಮಕ ವ್ಯಕ್ತಿಗಳನ್ನು ಆದಷ್ಟು ಕಡಿಮೆ ಮಾಡಿ ಒಳ್ಳೆಯ ಮಾತು  ಯೋಚನೆಗಳಿಂದ ಒಳ್ಳೆಯ ಭವಿಷ್ಯ ಕಟ್ಟಿಕೊಂಡು ಈ ರಹಸ್ಯ ಶಕ್ತಿಯ ಬಗ್ಗೆ ಅರಿವು ಮೂಡಿಸಿ ಎಲ್ಲರ ಉತ್ತಮ ಭವಿಷ್ಯಕ್ಕೆ ಸಹಕರಿಸೋಣ.